Tuesday 16 December 2008

ಮುಂಗಾರು ಮಳೆ- ಭಾಗ ೨


ಬೇಡ ಬೇಡ ಎಂದರು ಮತ್ತೆ ಮತ್ತೆ ಅದೇ ಶಾಲಾ ದಿನಗಳ ಸವಿ ನೆನೆಪಿನಲ್ಲಿ ಮನಸು ತೇಲಿ ಹೋಗುತ್ತದೆ . ಆ ದಿನಚರಿಯೂ ಎಂದೆಂದಿಗೂ ಮರೆಯಲಾಗದ ಒಂದು ವಿಶೇಷ ಅನುಭವ. ಒಂಬತ್ತು ಘಂಟೆಯ ಕ್ಲಾಸಿಗೆ ಏಳು ವರೆ ಘಂಟೆಗೆ ಹೋಗಿ ಕ್ಲಾಸ್ರೂಮ್ನ ಬಾಗಿಲು ತೆಗೆದು , ಬ್ಯಾಗ್ ಅನ್ನು ಒಂದೆಡೆಗೆ ವಗೆದು ಸೈಕಲ್ ಸ್ಟ್ಯಾಂಡ್ ನ ಬಳಿ ಸುಳಿದಾಡಿ , ಶಾಲಾ ಮೈದಾನದ ಕಟ್ಟೆಯ ಮೇಲೆ ಕುಳಿತು ಯಾವ ಮೇಸ್ಟ್ರು , ಇನ್ನೇನು ಕಾದಿದೆಯೋ ಎಂದು ಯೋಚಿಸುತ್ತಿದ್ದ ಹಾಗೆ ಸೈಕಲ್ ಸ್ಟ್ಯಾಂಡ್ ನ ಎಡ ಬದಿಯಿಂದ ಮೆಲ್ಲನೆ ಕಣ್ಣು ಮಿಟಿಕಿಸದೇ ನನ್ನನ್ನೇ ನೋಡುತ ಬರುತಿದ್ದ ಹುಡುಗಿಯ ಸವಿ ನೆನಪಿಗಾಗಿ ಈ ಲೇಖನ.

ನಾನು ಆಗ ಒಂಬತ್ತನೇ ತರಗತಿಯಲ್ಲಿ ಇದ್ದೆ. ಅಂದೊಂದು ದಿನ ಏನೋ ಯೋಚನೆ ಮಾಡುತ್ತಾ ನಾನು ಮೊದಲನೆ ಮಹಡಿಯ ಮೇಲೆ ನಿಂತಿದ್ದೆ. ಎಲ್ಲಿಂದಲೋ ಒಂದು ಸುಮಧುರ ದ್ವನಿ ಕೇಳಿ ಬಂತು, ತನ್ನದೇ ಲೋಕದಲ್ಲಿ ಅವಳ ಗೆಳತಿಯ ಜೊತೆ ನಗುತ್ತಾ ಬರುತ್ತಿದ್ದಳು ವಂಧನ. ಅವಳ ಹೆಸರು ಮೊದಲೇ ತಿಳಿದಿತ್ತು ನನಗೆ. ಹಿಂತಿರುಗಿ ಅವಳನ್ನು ಒಮ್ಮೆ ನೋಡಿದೆ - ಹಾಗೆ ನೋಡುತ್ತಲೇ ನಿಂತಲ್ಲಿಯೇ ಮರುಳಾಗಿ ಹೋದೆ . ಆ ಗುಂಡು ಮುಖ , ಮದ್ಯೆ ಬೈತಲೆ , ಆ ಕಣ್ಣು ಇದೆಲ್ಲದರ ಜೊತೆಗೆ ಆ ಗಂಭೀರ ನಡೆ , ಮತ್ತೆ ಮತ್ತೆ ಅವಳನ್ನೇ ನೋಡಿದೆ. ಆ ದಿನ ಹೇಗೆ ಮುಗಿಯಿತೋ ತಿಳಿಯಲಿಲ್ಲ.

ಮನೆಗೆ ಬಂದ ಮೇಲೆ ಓದಲು ಬರೆಯಲು ಮನಸೇ ಇರಲಿಲ್ಲ. ಮೊದಲ ಬಾರಿ ಒಂದು ಹುಡುಗಿಯ ಚಿತ್ರ ಕನಸಿನಲ್ಲಿ ಬಂತು. ವಂಧನಳ ಚಿತ್ರವನ್ನು ಕನಸಿನಲ್ಲಿ ನೋಡಿ ಅಚ್ಚರಿ ಅಷ್ಟೆ ಅಲ್ಲ ಮತ್ತೆ ಮತ್ತೆ ನೋಡಬೇಕೆಂಬ ಹಂಬಲ ನನ್ನಲ್ಲಿ ಮೂಡಿತು.

ಮರು ದಿನ ಬೆಳಿಗ್ಗೆ ಶಾಲೆಗೆ ಹೋದ ತಕ್ಷಣ ಯಾವಾಗ ಅವಳನ್ನು ನೋಡುತ್ತಿನೋ ಎಂದು ತಡಪಡಿಸಲಾರಂಬಿಸಿದೆ. ಮುಂಜಾನೆಯ ಪ್ರಾರ್ಥನೆ ಮುಗಿದ ತಕ್ಷಣ ಅವಳ ಸಾಲಲ್ಲಿ ಅವಳು ನಿಧಾನವಾಗಿ ನಡೆದುಕೊಂಡು ಹೋದಳು. ಪ್ರೀತಿ ಮಾಡಿದವರನ್ನು ದೇವರೇ ಸೇರಿಸುತ್ತಾನಂಥೆ. ನನ್ನ ತರಗತಿಯಲ್ಲಿ ಅವಳ ಗೆಳತಿ ಇರುವುದು ನನಗೆ ಗೊತ್ತಿರಲಿಲ್ಲ. ವಂಧನ ಅವಳನ್ನು ಮಾತಾಡಿಸಲು ಬಂದಾಗ ನನ್ನ ಕಣ್ಣು ಅವಳ ಮೇಲೆ ಇತ್ತು. ಇದನ್ನು ಗಮನಿಸಿದ ಅವಳು ನಂತರ ನನ್ನ ಬಳಿಗೆ ಬಂದು " ಹೇಯ್ ಯಾಕೋ ಹಾಗೆ ನೋಡುತ್ತಾ ಇದ್ದೀಯ "ಅಂದಳು, ಏನು ಇಲ್ಲ ನಿನ್ನನು ನೋಡುತ್ತಾ ಇದ್ದರೆ ನೋಡುತ್ತಲೇ ಇರಬೇಕು ಅಂತ ಅನಿಸುತ್ತದೆ ಅಂತ ಹೇಳಿದೆ. ಅದನ್ನು ಕೇಳಿದ ಕೂಡಲೇ ನಕ್ಕು ತಲೆ ತಗ್ಗಿಸಿ ಹೊರಟುಹೋದಳು. ಅಯ್ಯೋ ಇಂಥ ಅವಕಾಶ ಹಾಳು ಮಾಡಿಕೊಂಡೆನಲ್ಲ ಅಂಥ ನನ್ನನ್ನು ನಾನೇ ಬೈದು ಬೇಸರ ಗೊಂಡೆ.

ಮನೆಗೆ ಬಂದ ಮೇಲೆ ಅವಳದೇ ಯೋಚನೆ - ನಿದ್ದೆ ಯಾವಾಗ ಹತ್ತಿತೋ ತಿಳಿಯಲಿಲ್ಲ. ಮೂರನೆಯ ದಿನವಾದ ಇಂದು ಏನಾದರು ಸರಿ ಅವಳನ್ನು ಮಾತಾಡಿಸಬೇಕು ಅಂಥ ನಿರ್ಧಾರ ಮಾಡಿ ಶಾಲೆಗೆ ಹೋದೆ. ಅದ್ರುಸ್ಟ ವಶಾತ್ ಅವಳು ಬೇಗನೆ ಬಂದಿದ್ದಳು , ಯುದ್ದಕ್ಕೆ ಹೋಗುವ ಪರಿಯಲಿ ಸಿದ್ಧವಾಗಿ ಹೋದೆ. ಅವಳ ತರಗತಿಯ ಮುಂದೆ ನಿಂತಿದ್ದಳು. ವಂಧನ ಎಂದು ಮೆಲ್ಲಗೆ ಕರೆದೆ , ಏನು ವಿಶ್ವನಾಥ್ ಅಲ್ಲ ಕಾಶಿ ಎಂದು ಅವಳು ಅಂದಾಗ , ಹೇಯ್ ನನ್ನ ಹೆಸರು ನಿನಗೆ ಹೇಗೆ ಗೊತ್ತು ಅಂತ ಕೇಳಿದೆ ಅದಕ್ಕೆ ಅವಳು ನಿನ್ನ ಹೆಸರು ಮಾತ್ರವಲ್ಲ ನಿನ್ನ ಬಗ್ಗೆ ನನಗೆ ಬಹಳ ಗೊತ್ತು ಅಂತ ಹೇಳಿದಳು. ಆಶ್ಚರ್ಯವಾಗಿ ನಿನ್ನ ಹತ್ತಿರ ನಾನು ಮಾತಾಡಬೇಕು ಅಂತ ಹೇಳಿದೆ , ಅದಕ್ಕೆ ಅವಳು ಈಗ ಬೇಡ, ಮೊದಲನೆ ವಿರಾಮದಲ್ಲಿ ಮಾತಾಡೋಣ ಅಂತ ಹೇಳಿದಳು. ಹಾಳು ಸಮಯ ಎರಡು ಪಾಠ ಮುಗಿಯುವಸ್ಟರಲ್ಲಿ ಎರಡು ಯುಗವೇ ಕಳೆದಂತಾಯಿತು ನನಗೆ. ಮೊದಲನೆ ಮಹಡಿಯಲಿದ್ದ ಪ್ರಾರ್ಥನಾ ಮಂದಿರದ ಎದುರು ನಿಂತು ವಂಧನ ನಾನು ನಿನ್ನನು ಪ್ರೀತಿಸುತ್ತಿದ್ದೇನೆ ಅಂತ ಹೇಳಿಯೇ ಬಿಟ್ಟೆ - ಮೊದಲನೆ ಬಾರಿ ಹೃದಯ ಬಾಯಿಂದ ಹೊರಗೆ ಬಂದು ಬಿಡುವ ಭಾಸವಾಯಿತು. ಅವಳು ನನಗೆ ಯೋಚಿಸಲು ಸ್ವಲ್ಪ ಸಮಯ ಬೇಕು ಅಂತ ಹೇಳಿದಳು. ಬಹುಷಃ ತುಂಬ ಸಿನಿಮಾ ನೊಡುತ್ತಾಳೊ ಏನೋ ಅಂತ ಅಂದು ಕೊಂಡು ಮುಂದಿನ ಪಾಠಕ್ಕಾಗಿ ಹಿಂತಿರುಗಿ ಬಂದೆ. ಮಧ್ಯಾನ ಊಟಕ್ಕೆ ಬಿಟ್ಟಾಗ ಕಾಶಿ I ಲವ್ u ಅಂತ ಅವಳು ಹೇಳಿದ ಕೂಡಲೇ, ಮುಂಗಾರು ಮಳೆಯ ಹನಿಗಳಲ್ಲಿ ಮಿಂದು ಹೋದ ಕಾಶಿ.

ಪ್ರತಿ ದಿನ ಅದೇ ಮಾತು, ಕೆಲವೊಮ್ಮೆ ಮುನಿಸು, ಒಂದು ವರ್ಷ ಹೇಗೆ ಕಳಿಯಿತೋ ತಿಳಿಯಲಿಲ್ಲ. ಬೇಸಿಗೆ ರಜೆಗಾಗಿ ಕಾಯುತ್ತಿದ್ದ ನಾನು ಯಾಕಾದರೂ ರಜೆ ಬಂದಿದೆಯೋ ಅಂತ ಕೊರಗಿದೆ. ಅವಳ ನೆನಪಲ್ಲಿ ಕವನಗಳನ್ನು ಗೀಚಿದೆ , ಕೆಲವು ಚಿತ್ರಗಳನ್ನು ಬಿಡಿಸಿದೆ ಸಮಯ ಸಿಕ್ಕಾಗಲೆಲ್ಲ ಅವಳದೇ ಧ್ಯಾನ. ಹೀಗಿರುವಾಗ ಹತ್ತನೇ ತರಗತಿಗೆ ಹೋಗುವ ಹುಡುಗರಿಗೆ ಹತ್ತು ದಿನ ಮುಂಚಿತವಾಗಿ ಶಾಲೆ ತೆರೆಯಲಿದೆ ಎಂದು ಘೋಷಿಸಿದರು. ನನ್ನಷ್ಟು ಸಂತೋಷ ಪಟ್ಟವರಿಲ್ಲ. ಶಾಲೆಗೆ ಹೋದ ಮೊದಲ ದಿನ ಹೇಗಾದರೂ ವಂಧನಾಗೆ ವಿಷಯ ತಿಳಿಸಬೇಕು ಅಂಥ ಅಂದುಕೊಂಡೆ. ಅದೇ ದಿನ ಅವಳ ಗೆಳತಿಯೊಬ್ಬಳು ಶಾಲೆಯ ಬಳಿ ಸಿಕ್ಕಿದಳು. ಅವಳ ಮುಖಾಂತರ ಸುದ್ದಿ ತಲುಪಿಸಿದೆ. ಮಾರನೆಯ ದಿನ ಶಾಲೆ ಬಿಡುವ ವೇಳೆಗೆ ಸೈಕಲ್ ಸ್ಟಾಂಡ್ನ ಬಳಿ ನನಗಾಗಿ ಕಾದಿದ್ದಳು ವಂಧನ.

ಹತ್ತನೇ ತರಗತಿಗೆ ಬಂದ ನಂತರ ನಾನು ಲಿಟರರಿ ಕ್ಲಬ್ನ ಪ್ರೆಸಿಡೆಂಟ್ ಆಗಿ ಆಯಿಕೆ ಆದೆ. ಭಾಗವಹಿಸಿದ ಎಲ್ಲಾ ಸ್ಪರ್ದೆಯಲ್ಲೂ ನನ್ನದೇ ಮೊದಲ ಸ್ಥಾನ. ಅವಳದೇ ಸ್ಫೂರ್ತಿ, ಅವಳ ನಗುವೇ ನನ್ನ ಪ್ರೇರಣೆ. ಭರತ ನಾಟ್ಯದಲ್ಲಿ ಅವಳನ್ನು ಮೀರಿಸುವರಿರಲಿಲ್ಲ. ಮೊದಲನೆ ಸಾಲಲ್ಲಿ ಕುಳಿತು , ಆಹಾ ಓಹೋ ಅಂತ ಕೊಂಡಾಡಿ, ಹೀಗೇ ಕೊಲ್ಲುತ್ತಿಯ ನನ್ನ ಅಂಥ ಮನಸಿನಲ್ಲೇ ಅಂದು ಕೊಂಡು ಅವಳ ಪ್ರೀತಿಯಲ್ಲಿ ಇನ್ನಸ್ಟು ಮುಳುಗಿ ಹೋದೆ.

ಆ ಒಂದು ವರ್ಷ ಹೇಗೆ ಹಾರಿತೋ ಅದರ ಅರಿವೇ ಆಗಲಿಲ್ಲ. ನನ್ನ ಮತ್ತು ನನ್ನ ಪ್ರೀತಿಯ ಶಾಲೆಯ ಬಂಧ ಅಲ್ಲಿಗೆ ಮುಗಿಯಿತು. ಮೆಲ್ಲಗೆ ಹೆಜ್ಜೆ ಹಾಕಿ ಮನೆಗೆ ಹಿಂತಿರುಗಿ ಬಂದೆ.

ನಾನು ಕಾಲೇಜಿನ ಮೆಟ್ಟಿಲು ಏರಿದೆ. ವಂಧನ ಇನ್ನು ಆಗ ಹತ್ತನೇ ತರಗತಿ. ಮಧ್ಯಾನ ಅವಳು ಮನೆಗೆ ಊಟಕ್ಕಾಗಿ ಹೋಗುತ್ತಿದ್ದಳು, ನಾನು ಕಾಲೇಜಿಗೆ ಬಂಕ್ ಹೊಡೆದು ಶಾಲೆಯ ಗೇಟ್ನ ಬಳಿ ನಿಂತ್ತಿರುತ್ತಿದ್ದೆ. ಎರಡು ನಿಮಿಷದಲ್ಲಿ ಮಾತು ಮುಗಿಸಿ,ಮುಂದಿನ ಭೇಟಿ ಯಾವಾಗ ಅಂಥ ನಿರ್ಧರಿಸಿ ಅವಳು ಮನೆಗೆ, ನಾನು ಕಾಲೇಜಿಗೆ.

ಒಂದು ವಾರದಿಂದ ನಮ್ಮ ಭೇಟಿ ಒಂದು ತಿಂಗಳಿಗೊಮ್ಮೆ ಆಗ ತೊಡಗಿತು. ಬಹುಷಃ ಸೆಲ್ ಫೋನ್ ಆಗ ಇದ್ದಿದ್ದರೆ ಅದರ ತಿರುವೇ ಬೇರೆ ಆಗಿರುತಿತ್ತು. ದಿನಗಳು ಉರುಳಿದಂತೆ ನನ್ನ ಪ್ರೀತಿ ಜಾಸ್ತಿ ಆಗ ತೊಡಗಿತು. ಏನೆಲ್ಲಾ ಪ್ರಯತ್ನ ಪಟ್ಟು ಅವಳನ್ನು ಭೇಟಿ ಮಾಡುವ ಸಾಹಸ ಮಾಡಿದೆ. ಕೆಲವೊಮ್ಮೆ ಸಂತೋಷ, ಕೆಲವೊಮ್ಮೆ ದುಖ. ಹೀಗೆ ದಿನಚರಿಯೇ ಬದಲಾಗಿ ಹೋಯಿತು.

ಪ್ರತಿ ಸಾರಿ ಭೇಟಿ ಆದಾಗಳು ನಾನು ಅವಳಿಗೆ ನಮ್ಮ ಪ್ರೀತಿ ಹೀಗೆ ಇರಬೇಕಾದರೆ ನಾವು ತಾಳ್ಮೆ ಇಂದ ಇರಬೇಕು ಅಂತ ಹೇಳ್ತಾನೆ ಇದ್ದೆ. ಆದರೆ ಅಂಗ್ಲ ಭಾಷೆಯ ನುಡಿ ಮುತ್ತಿನಂತೆ "Out of Sight is Out of Mind" ಕೆಲವರಿಗೆ ನಿಜವಾಗಿಬಿಡುತ್ತದೆ. ಇತ್ತ ಕಡೆ ನನ್ನ ಪ್ರೀತಿ ಜಾಸ್ತಿ ಆಗುತ್ತಾ ಹೋದರೆ ಅತ್ತ ಕಡೆ ವಂಧನ ನನ್ನ ಮರೆಯಲೆತ್ನಿಸಿದಳು. ಕಾರಣ ಏನೇ ಇರಬಹುದು, ನನ್ನ ಎಲ್ಲಾ ಪ್ರಯತ್ನಗಳು ವ್ಯರ್ಥವಾದವು.ಕೊನೆಗೊಮ್ಮೆ ನೋಡು ಕಾಶಿ ನಾನು ಕೂರ್ಗಿ,ನೀನು ಬ್ರಾಹ್ಮಣ ನಮ್ಮಿಬರ ಮಿಲನ ಈ ಜನ್ಮದಲ್ಲಿ ಸಾದ್ಯವಿಲ್ಲ , ನೀನು ನನ್ನನ್ನು ಮರೆತುಬಿಡು ಅಂತ ಹೇಳಿ ಹಿಂದಿರುಗದೆ ಹೊರಟುಹೋದಳು.

ನನಗಂತೂ ಸಾಕಷ್ಟು ಸಮಯವೇ ಬೇಕಾಯಿತು ಅವಳ ಮಾತುಗಳನ್ನು ಜೀರ್ಣಿಸಲು. ಮನಸಿಗೆ ಬಂದದ್ದನ್ನೆಲ್ಲಾ ಬರೆದೆ,ಇನ್ನೂ ಬೇಸರವಾದಾಗ ಮಿತ್ರನೊಂದಿಗೆ ಹಂಚಿಕೊಂಡೆ , ಕೊನೆಗೂ ಬ್ರಹ್ಮೆ ಎಂಬ ಪದದ ಅರ್ಥ ತಿಳಿದೆ. ನಾನು ಮತ್ತೆ ವಂಧನಳನ್ನು ನೋಡಿದ್ದು ಒಂದು ವರ್ಷದ ಬಳಿಕವೇ. ಅಷ್ಟರಲ್ಲಿ ಇಬ್ಬರಲ್ಲೂ ಬಹಳಷ್ಟು ಬದಲಾವಣೆಗಳಾಗಿದ್ದವು. ನನ್ನನ್ನು ಕಂಡೊಡನೆಯೇ ಮುಗುಳ್ನಕ್ಕು ಅದೇ ನೇರ ನೋಟದಿಂದ ನೋಡಿದಳು. ಮತ್ತೆ ಆ ಮಾಯಾ ಜಾಲದಲ್ಲಿ ಸಿಲುಕಲು ನಾನು ಸಿದ್ಧನಿರಲಿಲ್ಲ.

ಅಷ್ಟರಲ್ಲಿ ನಾನು ಜೀವನದ ಮಧುರ ಕ್ಷಣಗಳನ್ನು ನನ್ನ ಮೈಕೋ ಗೆಳೆಯರೊಂದಿಗೆ ಕಳೆಯಲು ನಿರ್ಧರಿಸಿದ್ದೆ. ಈ ಒಂದು ನಿಜ ಘಟನೆ ಸಾಕಷ್ಟು ಅನುಭವಗಳನ್ನು , ಅನೇಕ ಪಾಠಗಳನ್ನು ನನಗೆ ಕಲಿಸಿತ್ತು. ಈ ದಿನ ಯೋಚನೆ ಮಾಡಿದರೆ ಒಂದು ಸುಮಧುರ ಭಾವನೆ, ವಿದಿಯ ಆಟದ ಒಂದು ತುಣುಕು, ನನ್ನನ್ನು ಕವಿಯನ್ನಾಗಿ ಮಾಡಿ, ಆ ನೋವು ಇನ್ನೂ ಬೇಕು ಎಂಬ ಹಂಬಲವನ್ನು ನನ್ನಲ್ಲಿ ಮೂಡಿಸಿ, ಎಂದೂ ಮರೆಯದ ಸವಿ ಚಿತ್ರವನ್ನು ಹೃದಯದಾಳದಲ್ಲಿ ಬಿಡಿಸಿ, ಅಗಾಗ ಹೃದಯದ ಬಡಿತದೊಂದಿಗೆ ಹೊರಬಂದು ನೋವನ್ನುಂಟುಮಾಡಿ ಮತ್ತೆ ತಣ್ಣಗಾಗುವ ಈ ಮುಂಗಾರು ಮಳೆಯ ಚಳಿ ಅನುಭವಿಸಿದವರಿಗೇ ಗೊತ್ತು.

ಏನೇ ಇರಲಿ ನನಗಂತೂ ಎರಡು ವಿಷಯದ ಖುಷಿ - " ಎಲ್ಲಾ ಬ್ರಹ್ಮೆ " ಯಾ ಸ್ವಾದವನ್ನು ಸವಿದೆ.
- ಹುಡುಕಾಟದ ಗೊಂದಲದಲ್ಲಿ ನನ್ನನ್ನೇ ಹಲವಾರು ಬಾರಿ ಹುಡುಕಿಕೊಂಡೆ.

4 comments:

  1. Beautifully composed!

    I can understand the anxiousness, extreme joy and pain. I'm sure I would go back and do the same things again, only better.

    You have changed her name, haven't you?

    ReplyDelete
  2. I wish I could change a lot more which I'm doing these days.

    ReplyDelete
  3. ಕಾಶಿ, ತುಂಬಾ ಅರ್ಥಪೂರ್ಣವಾಗಿದೆ. In the course of life, I too wish if I could change a lot of things. I believe time is the greatest healer. Until recently, I too undervalued the meaning of "ಎಲ್ಲಾ ಭ್ರಮೆ".
    I think this experience is like measles, it happens to everybody at some stage in life, at least once!!!

    ReplyDelete
  4. Hi Bro,

    I guess u had shared this with me long ago,however good naration of ur feelings.As Shashi says we all have come across these feeling & emotions.What memories? they are really so sweet.........

    ReplyDelete