Showing posts with label Kannada. Show all posts
Showing posts with label Kannada. Show all posts

Sunday, 12 January 2014

ನಾನೇನಾ ಆ ರಾಯ ???

ಮುಂಜಾನೆ ಐದರ ಸಮಯ - ಮಹಾಪ್ರಭು ಕಾಡಾನೆಯೊಂದು ರಾಜ್ಯದೊಳಗೆ ನುಗ್ಗಿ ಪ್ರಜೆಗಳನ್ನು ಭಯಭೀತರನ್ನಾಗಿ ಮಾಡಿದೆ. ಬೆಳೆಗಳನ್ನು ನಾಶ ಮಾಡಿ, ರತ್ನ ವ್ಯಾಪಾರ ಮಳಿಗೆಗೆ ನುಗ್ಗಿ ಇಬ್ಬರನ್ನು ಹತ್ಯೆ ಮಾಡಿ, ವಿಟಲ ಮಂದಿರದ ಬಳಿ ಸುಳಿದಾಡುತ್ತಿದೆ. ತಾವು ಈ ಆಪತ್ತಿನಿಂದ ಪ್ರಜೆಗಳನ್ನು ಕಾಪಾಡಬೇಕು. 

ಆಗಿನ್ನು ದೇವರ ಪ್ರಾರ್ಥನೆ ಅಭಿಷೇಕವನ್ನು ಮುಗಿಸಿ ಉದಯಿಸುತಿರುವ ಸೂರ್ಯನ ದಿಟ್ಟಿಸಿ ನೋಡುತ್ತಿದ್ದ ನಮಗೆ ಸೇನಾದಿಪತಿ ತಂದ ವಿಷಯ. ನಾವು ಆಗ ಸೇನಾದಿಪತಿಯನ್ನು ಅವರು ಮಾಡಿರುವ ಪ್ರಯತ್ನದ ಬಗ್ಗೆ ಕೇಳಿದೆವು. ಸೇನಾದಿಪತಿಯು ತನ್ನ ಅನುಭವಕ್ಕೆ ತೋರಿದಂತೆ ಎಲ್ಲಾ ಪ್ರಯತ್ನವನ್ನು ಮಾಡಿದ್ದರು. ಇದೀಗ ನಮಗೆ ಸ್ಪಷ್ಟವಾಗಿ ಕಂಡ ದೃಶ್ಯ. ವೈರಿಯು ನಾನಾ ವೇಷ ಧರಿಸಿ ನಮ್ಮ ರಾಜ್ಯದ ಮೇಲೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಾರೆ. ನಮ್ಮಲ್ಲಿ ಭಯ ಭೀತಿ ಕಂಡರೆ ಅಂದಿಗೆ ಅಂತ್ಯವಾದೀತು ಈ ವಿಜಯನಗರ ಸಾಮ್ರಾಜ್ಯ. ಇದು ಇತಿಹಾಸ ನಮಗೆ ಹೇಳಿಕೊಟ್ಟ ರಹಸ್ಯ. ಈ ಕಾಡಾನೆಯ ತರದಿ ಅದೆಷ್ಟೋ ಬಾರಿ ನಮ್ಮ ಶಕ್ತಿಯ ಪರೀಕ್ಷೆ ನಡೆದಿದೆ. ಇಲ್ಲಿಯ ವರೆವಿಗೂ ಸಹಸ್ರ ಯುದ್ದಗಳನ್ನು ಜೈಸಿದ ನಮಗೆ ವಿಜಯವಿಟ್ಟಳನಿಂದ ಮತ್ತೊಂದು ಪರೀಕ್ಷೆಯೇ ? ಆ ತಾಯಿ ಭುವನೇಶ್ವರಿಯ ಕೃಪಾಕಟಾಕ್ಷ ನಮ್ಮ ಮೇಲೆ ಇರುವವರೆಗು ಕಾಡಾನೆಯ ಹಿಂಡೇ ಬಂದರು ಒಂಟಿಯಾಗಿ ಜೈಸಬಲ್ಲೆವು ನಾವು. 



ನಮ್ಮ ಯುದ್ದ ಶಾಲೆಯಲ್ಲಿ ಪಳಗಿದ ಗಂಡಾನೆ ಭೀಷ್ಮನ ಬೆನ್ನೇರಿ ಕೈಯಲ್ಲಿ ಹಗ್ಗದ ನುಣುಕು ಹಿಡಿದು ಹಾದಿ ತಪ್ಪಿ ಬಂದ ಆ ಕಾಡಾನೆಯ ಬಳಿಗೆ ಬರುತ್ತಲೇ ಅದು ಧಾಳಿ ಮಾಡಿತು, ಚಿಂ ಎಂದು ಅದರ ಮೇಲೆ ಹಾರಿ, ಮುಷ್ಟಿಯ ಬಿಗಿ ಮಾಡಿ ಅದರ ತಲೆಗೆ ಸಿಡಿಲೇ  ಬಡಿದಂತೆ ಆಕ್ರಮಿಸಿದೆವು. ಒಂದೇ ಏಟಿಗೆ ಪ್ರಗ್ನೆತಪ್ಪಿ ದಟ್ತೆಂದು ನೆಲ್ಲಕ್ಕುರುಳಿತು ಮದಿಸಿದ ಆ ಕಾಡಾನೆ. ಮತ್ತೊಂದು ಜಯ !




ಶಿಲ್ಪಿಗಳು ಕವಿಗಳು ಸಕಲ ಕಲಾವಲ್ಲಬರು ತುಂಬಿರುವ ನಮ್ಮ ಆಸ್ಥಾನದ ನೋಟವೇ ಒಂದು ಹೆಮ್ಮೆ. ವೈರಿಗಳಿಗೆ ಸಿಂಹ ಸ್ವಪ್ನವಾಗಿ ಭೀತಿಸುವ ನಮ್ಮ ಸೈನ್ಯ, ಅಪ್ಸರೆಗಳನ್ನೇ ನಾಚಿಸುವ ರಾಜ ನರ್ತಕಿಯರು, ಹಿರಿದಾಗಿ ನಮ್ಮ ಸಿಂಹಾಸನದ ಬಳಿ ರಕ್ತದೊಕುಳಿಗಾಗಿ ಸದಾ ಸಿದ್ದವಿರುವ ಖಡ್ಗ. ಈ ವೈಭವಗಳ ತಲೆತಲಾಂತರದಿಂದ ಕಾಪಾಡಿಕೊಂಡು ಬಂದ ಹಿರಿಮೆಯ ವಂಶ ನಮ್ಮದು. 


ಶ್ರೀ ಕೃಷ್ಣದೇವರಾಯ                                                        ಶ್ರೀ ವಿಶ್ವನಾಥ

ಇದು ನನ್ನ ಪುನರ್ಗೊಚರಿಸುವ ಸ್ವಪ್ನ, ಮತ್ತೆ ಮತ್ತೆ ಅದೇ ದೃಶ್ಯಗಳು, ರಣರಂಗದಲ್ಲಿ ವೈರಿಗಳ ರುಂಡಗಳ ಮಾರಣಹೋಮ, ಎಲ್ಲಿ ನೋಡಿದರಲ್ಲಿ ಹಸಿರು ತುಂಬಿರುವ ನನ್ನ ಸಾಮ್ರಾಜ್ಯ, ಮುಗಿಲೆತ್ತರಕೆ ನಿಂತ ಶಿಲೆಗಳು, ದಶಕವಿಡೀ ನಡೆದರು ಕೊನೆಗಾಣದ ಗಡಿ, ವಜ್ರ ವೈಡುರ್ಯಗಳಿಂದ ತುಂಬಿದ ಅರಮನೆ. 

ನಾನೇ ಆ ರಾಯನೆನ್ನಲು ಈ ಸ್ವಪ್ನವೇ ನನ್ನ ಸಾಕ್ಷಿ !



Thursday, 2 January 2014

"ಚಿಂತನ"

ಮುಂಜಾನೆ ಮನೆಯ ಅಂಗಳದಿ ನವಿಲಿನ ಕೂಗು, ಪಕ್ಷಿಗಳ ಚಿಲಿ ಪಿಲಿ, ದೊಡ್ದಿಯಲ್ಲಿನ ಹಸುವಿನ ಅಂಬಾ ಎಂಬ ಪ್ರೀತಿಯ ಕರೆ ಇರುವಾಗ, ಯಾರಿಗೆ ಬೇಕು ಗಡಿಯಾರ ? ಇಲ್ಲಿ ಗಡಿಯಾರದ ಮುಳ್ಳಿನ ಹಾಗೆ ದಿನಚರಿ ಮಾಡುವ ಅವಶ್ಯವಿಲ್ಲ. ನನ್ನೊಡತಿ ಮಾಡಿದ ಬಿಸಿ ಬಿಸಿ ಗಂಜಿಯ ಕುಡಿದು, ಗದ್ದೆಗೆ ಆಕಳನ್ನು ಕರೆದೊಯ್ದು, ತಳಿಯನ್ನು ಪರೀಕ್ಷಿಸಿ, ನೀರಿನ ಕಟ್ಟೆಯ ಸರಿಯಾದ ಕಾಲುವೆಗೆ ಹರಿ ಬಿಟ್ಟು, ಹಾಗೆ ಸುಳಿದಾಡುತ ಹೊಂಗೆಯ ಮರದಡಿ ಕೂರುವಷ್ಟರಲ್ಲಿ ಊಟದ ಸಮಯ. ಅಮ್ಮನ ಕೈ ಹಿಡಿದು ನಲಿಯುತ ಜಿಗಿಯುತ ಹಾತರದಿ ಓಡೋಡಿ ಬರುವ ನನ್ನ ಮಗಳು "ಚಿಂತನ".

ಮೂವರು ಊಟವ ಮಾಡಿದ ನಂತರ, ಚಿಂತನಾಳ ಕಲಿವಿಕೆಯ ಸಮಯ. ಅವಳು ಬೇರೆ ಮಕ್ಕಳ ಹಾಗೆ ಶಾಲೆಗೆ ಹೋಗುವುದಿಲ್ಲ. ನಮ್ಮ ಪರಿಸರವೇ ಅವಳ ಶಾಲೆ. ಈಗ ಅವಳಿಗೆ ಮೂರುವರೆ ವರ್ಷ, ಅ ಆ ಇ ಈ ಅಕ್ಷರಗಳನ್ನು ಗುರುತಿಸುತ್ತಾಳೆ, ೧ ೨ ಇಪ್ಪತ್ತರ ವರೆಗೆ ಹೇಳುತ್ತಾಳೆ, a b c d ಅಕ್ಷರಗಳನ್ನು ಗುರುತಿಸುತ್ತಾಳೆ, ಅಮ್ಮ ಹೇಳಿಕೊಟ್ಟ ಹಾಡುಗಳನ್ನು ತಪ್ಪಿಲ್ಲದೆ ಹಾಡುತ್ತಾಳೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪದಗಳನ್ನು ಜೋಡಿಸಲು ಕಲಿತಾದ ನಂತರ ಅವಳ ಅಮ್ಮ ಹಿಂದಿ ಹೇಳಿಕೊಡುವುದೆಂದು ಹೇಳಿದ್ದಾಳೆ. ಗಣಿತವನ್ನು ಈಗಾಗಲೇ ಕಲಿಯುತ್ತಿದ್ದಾಳೆ.

ಚಿಂತನಾಳ ವಿಧ್ಯಾಭ್ಯಾಸ ಪರಿಸರದಲ್ಲಿ. ಇಲ್ಲಿ ಶಾಲೆಯ ಗಂಟೆಯ ಭಯವಿಲ್ಲಾ, ಖಡ್ಡಾಯವಾದ ಪುಸ್ತಕವಿಲ್ಲ, ಅವಳ ಮನಸ್ಸು ಏನು ಹೇಳುತ್ತದೋ ಅದ್ದನ್ನು ಕಲಿಯುತ್ತಾಳೆ. ಹಾಗೆಂದು ವಿಷಯಗಳ ಪಟ್ಟಿ ಇಲ್ಲಾ ಎಂದು ಅರ್ಥವಲ್ಲ. ನನ್ನ ಮತ್ತು ನನ್ನ ಹೆಂಡತಿಯ ಜೀವನದ ಅನುಭವಗಳಿಂದ ನಾವೇ ಒಂದು ಚೊಕ್ಕದಾದ ಪಟ್ಯವನ್ನು ಮಾಡಿದ್ದೇವೆ. ಇದರಲ್ಲಿ ಹಲವಾರು ಬಣ್ಣಗಳುಂಟು, ಕರ ಕುಶಲ ಹವ್ಯಾಸಗಳುಂಟು, ತರಕಾರಿ ಹಣ್ಣು ಬೆಳೆಯುವುದರ ರಹಸ್ಯಗಳುಂಟು, ಮೇಣವ ಮಾಡುವ ಪರಿಯುಂಟು, ಯಾರೊಡನೆ ಹೇಗೆ ವರ್ತಿಸಬೇಕು ಎಂಬ ಪಾಠಗಳುಂಟು , ಹಬ್ಬಗಳುಂಟು, ಸಿಹಿ ಭೋಜನ ನಳಪಾಕದ ಅಡುಗೆಮನೆಉಂಟು, ಹತ್ತು ಹಲವಾರು ಆಟಗಳುಂಟು, ನೊವ್ವು ನಲಿವಿನ ನೀತಿ ಕಥೆಗಳುಂಟು, ಎಲ್ಲಕ್ಕೂ ಮಿಗಿಲಾಗಿ ಜೀವನದ ಮಧುರ ಕ್ಷಣಗಳ ಸವಿಯುವ ಸಾಗರವೇ ಇಲ್ಲುಂಟು.

ಮುಂದುವರಿಯಲಿದೆ.........................






Tuesday, 5 January 2010

ಸುಂದರ ಬ್ರಹ್ಮೆ - 2009

 ೨೦೦೮ರಿಂದ ೨೦೦೯ರವರೆಗೆ ಬಹಳಷ್ಟು ಬದಲಾವಣೆಗಳಾದವು. ಇದು ಕನಸೋ ನೆನೆಸೋ ಎಂದು ಯೋಚಿಸುವಷ್ಟರಲ್ಲಿ ಒಂದು ವರ್ಷವೇ ಕಳೆದು ಹೋಗಿತ್ತು. ಗೋವಾದ ಗುಂಗಿನಲ್ಲಿ ಬೆಂಗಳೂರಿಗೆ ಹಿಂದಿರುಗಿದ ನಾನು ಮತ್ತೆ ನನ್ನದೇ ಆದ ಲೋಕವೊಂದನ್ನು ಹುಟ್ಟು ಹಾಕಿ ಅದರೊಳಗೆ ಹಾಯಾಗಿ ಕಳೆದು ಹೋಗಿದ್ದೆ.

ಒಂದೆಡೆ ಕೆಲಸ ತನ್ನ ಪಾಡಿಗೆ ಉತ್ಸಾಹದಲಿ ಸಾಗುತಿತ್ತು, ಮತ್ತೊಂದೆಡೆ ಮನೆಯಲ್ಲಿ ಮದುವೆ ವಿಷಯ ಬಂದಾಗಲೆಲ್ಲಾ ಮನಸ್ತಾಪ, ನನ್ನಿಂದ ಮನೆಯವರೆಲ್ಲರ ಸಂತೋಷವೇ ಹಾರಿ ಹೋಗಿತ್ತು. ಏನೇ ಪ್ರಯತ್ನ ಪಟ್ಟರು ನನ್ನಿಂದ ಸರಿ ಪಡಿಸಲಾಗದ ಪರಿಸರ ಮನೆಯಲ್ಲಿ ಉಂಟಾಗಿತ್ತು. ಇದನ್ನು ಬರೆಯಬೇಕೋ ಬೇಡವೋ ಎಂದು ಬಹಳ ಯೋಚಿಸಿ ಕೊನೆಗೆ ಇದು ನಾನು ಬಂದ ಹಾದಿ, ಇದು ಸತ್ಯ, ಈ ಕಹಿ ಘಟನೆಗಳು ಮುಂದೆ ಸಿಹಿಯಾಗಬಹುದೆಂಬ ಕಿಂಚ್ಚಿತು ನಂಬಿಕೆ ಇಲ್ಲದ ನಾನು ಹಾಗು ನನ್ನ ಮನೆಯವರು ೨೦೦೯ರ ಪರಿವರ್ತನೆ ನೋಡಿ ಅಚ್ಚರಿಗೊಂಡೆವು.

ಜನವರಿ ಹೇಗೆ ಕಳೆಯಿತೋ ತಿಳಿಯಲಿಲ್ಲಾ, ಆದರೆ ಫೆಬ್ರವರಿ ತಿಂಗಳಿಗೆ ನಾನು ಉಂಗುರುವನ್ನು ಬಿಚ್ಚಿಟ್ಟು ಒಂದು ವರ್ಷವಾಗಿತ್ತು.ಮನಸಿನ ಗೊಂದಲಗಳ ನಡುವೆ ಒಂದೇ ಒಂದು ಸಿಹಿ ನೆನಪೆಂದರೆ ನನ್ನ ಪ್ರೀತಿಯ Pinti ಯಾ ನಗು- ಅವನಿಗಿಂಥಾ ಆತ್ಮೀಯವಾದ ಬಂಧ ಬೇರೊಂದಿಲ್ಲ. Pinti ಗೆ ಜೈ !

ಸುಮಾರು ಐದು ವರ್ಷಗಳಿಂದ ನಾನು AOL ನ ಇನ್ಸ್ಟಂಟ್ ಮೆಸ್ಸೆಂಜರ್  ಬಳಸುತ್ತಿದ್ದೆ , ಆದರೆ ಆಕಸ್ಮಿಕವಾಗಿ ಎಲ್ಲಿಂದಲೋ ಒಂದು ಬರಹ ಬಂದು ನನಗಿಂತ ಹೆಚ್ಚಾಗಿ ನನ್ನ ತಂದೆ, ತಾಯಿ ಮತ್ತು ತಂಗಿಯ ಬಗ್ಗೆ ಯೋಚನೆ ಮಾಡುವ ಹಾಗೆ ಮಾಡಿತು. ಆ ನಾಲ್ಕು ಸಾಲಿನಲ್ಲಿದ್ದ ಗೌರವ,ಪ್ರೀತಿ ಆ ವ್ಯಕ್ತಿಯ ಬಗ್ಗೆ ಯೋಚಿಸುವ ಹಾಗೆ ಮಾಡಿ - ಆಹಾ ಇದ್ದರೆ ಹೀಗೆ ಇರಬೇಕು ಎಂದು ಅನಿಸಿತು.

ತಮಾಷೆಯಾಗಿ ಆರಂಭವಾದ ಆ ಸಂಪರ್ಕ ಧೀರ್ಘವಾಗಿ ಅವಳ ಮೇಲೆ ಪ್ರೀತಿಯನ್ನು ಉಂಟುಮಾಡಿತ್ತು.ಆ ಪ್ರಶ್ನೆಗಳ ಸುರಿಮಳೆಯನ್ನು ಉತ್ತರಿಸಿ ನಿಶ್ಚಿಂತೆಯಿಂದ ನಾಲ್ಕಾರು ದಿನ ಕಾಲ ಕಳೆದೆ. ಮನೆಯಲ್ಲಿ ಅಮ್ಮ ಅಪ್ಪನಿಗೆ ಅವಳ ಬಗ್ಗೆ ಹೇಳಿದೆ - ಅವರ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲಾ. ನನ್ನ ತಂಗಿ ಭಾವನಿಗೆ ಕೂಡ ತುಂಬಾ ಕುಶಿಯಾಯಿತು. ಅಪ್ಪನ ಆದೇಶದಂತೆ ಅವಳನ್ನು ಮನೆಗೆ ಕರೆತಂದೆ.

ಆ ದಿನ ಎಂದು ಮರೆಯಲಾಗದ ಅನುಭವ, ಧಾರಾಕಾರವಾಗಿ ಸುರಿದು ಬಂದ ಮಳೆ, ಹೇಗಿರುವಳೋ ನಮ್ಮ ಮನೆಗೆ ಬರುವ ಹುಡುಗಿ ಎಂಬ ಮನೆಯವರ ಕಾತುರ. ನನ್ನ ಹಿಂದೆ ಗಾಡಿಯ ಮೇಲೆ ಕುಳಿತಿದ್ದ ಅವಳ ಹೃದಯದ ಬಡಿತ ನನಗೆ ಕೇಳಿಸುತಿತ್ತು.ಬಲಗಾಲಿಟ್ಟು ಮನೆಗೆ ಬಂದ ಅವಳನ್ನು ನೋಡಿದ ಕೂಡಲೇ ಮನೆಯವರೆಲ್ಲಾ ಒಂದೇ ಕ್ಷಣದಲ್ಲೇ ನಮ್ಮನ್ನು ಹರಸಿದರು.

ಅದಾದಮೇಲೆ ಆಗಸ್ಟ್ನಲ್ಲಿ ನಿಶ್ಚಿತಾರ್ಥ - ನಂತರ ಸುಂದರ ಪಯಣ.ಇಲ್ಲಿಯವರೆಗೆ ಬರೆದದ್ದು ನನ್ನ ವಯಕ್ತಿಕ ಜೀವನದಲ್ಲಿ ನಡೆದ ಘಟನೆಗಳು.

ಈ ಮದ್ಯೆ ಕೆಲವು ಕಹಿ ಘಟನೆಗಳು ಕೂಡ ನಡೆದವು.ನಮ್ಮ ಸರಸ್ವತಿ ಅತ್ತೆ ಮಾರ್ಚ್ ತಿಂಗಳಲ್ಲಿ ತೀರಿ ಕೊಂಡರು.ಕಿರಣ್ ಭಾವನ ತಂದೆ (ಮಾವ) ಡಿಸೆಂಬರ್ನಲ್ಲಿ ತೀರಿ ಕೊಂಡರು.


ದೇವರ ದಯೆಯಿಂದ ಮನೆಯವರೆಲ್ಲರ ಆರೋಗ್ಯ ಸುಖ ಸ್ತಿತಿಯಲ್ಲಿತ್ತು. Pinti ಬಹಳಷ್ಟು ಸುಧಾರಿಸಿದ್ದಾನೆ.

೨೦೦೯ರಲ್ಲಿ ನಾ ಕಂಡ ಊರುಗಳು:
- ಚಿಕ್ಕಮಗಳೂರು woodway ಎಸ್ಟೇಟ್
- ಶಿರಡಿ
- ಜೋಗ ಜಲಪಾತ  
- ಮುರುಡೇಶ್ವರ  
- ಗೋಕರ್ಣ
- ಕೊಡಚಾದ್ರಿಯ ನಿಸರ್ಗಧಾಮ  
- ಕಾಕಾ ಬೇ - ಕೊಡಗು

೨೦೧೦ ದೇವರ ಆಶಿರ್ವಾದದಿಂದ ಚೆನ್ನಾಗಿರಲೆಂದು ಆಶಿಸುತ್ತ ಮತ್ತೆ ಇನ್ನೊಂದು ಸುಂದರ ಬ್ರಹ್ಮೆಯ ವಿಸ್ಮಯ ಲೋಕದ ಹುಡುಕಾಟದಲ್ಲಿ ಹೊರಟಿದ್ದಾನೆ ವಿಶ್ವನಾಥ...

Tuesday, 16 December 2008

ಮುಂಗಾರು ಮಳೆ- ಭಾಗ ೨


ಬೇಡ ಬೇಡ ಎಂದರು ಮತ್ತೆ ಮತ್ತೆ ಅದೇ ಶಾಲಾ ದಿನಗಳ ಸವಿ ನೆನೆಪಿನಲ್ಲಿ ಮನಸು ತೇಲಿ ಹೋಗುತ್ತದೆ . ಆ ದಿನಚರಿಯೂ ಎಂದೆಂದಿಗೂ ಮರೆಯಲಾಗದ ಒಂದು ವಿಶೇಷ ಅನುಭವ. ಒಂಬತ್ತು ಘಂಟೆಯ ಕ್ಲಾಸಿಗೆ ಏಳು ವರೆ ಘಂಟೆಗೆ ಹೋಗಿ ಕ್ಲಾಸ್ರೂಮ್ನ ಬಾಗಿಲು ತೆಗೆದು , ಬ್ಯಾಗ್ ಅನ್ನು ಒಂದೆಡೆಗೆ ವಗೆದು ಸೈಕಲ್ ಸ್ಟ್ಯಾಂಡ್ ನ ಬಳಿ ಸುಳಿದಾಡಿ , ಶಾಲಾ ಮೈದಾನದ ಕಟ್ಟೆಯ ಮೇಲೆ ಕುಳಿತು ಯಾವ ಮೇಸ್ಟ್ರು , ಇನ್ನೇನು ಕಾದಿದೆಯೋ ಎಂದು ಯೋಚಿಸುತ್ತಿದ್ದ ಹಾಗೆ ಸೈಕಲ್ ಸ್ಟ್ಯಾಂಡ್ ನ ಎಡ ಬದಿಯಿಂದ ಮೆಲ್ಲನೆ ಕಣ್ಣು ಮಿಟಿಕಿಸದೇ ನನ್ನನ್ನೇ ನೋಡುತ ಬರುತಿದ್ದ ಹುಡುಗಿಯ ಸವಿ ನೆನಪಿಗಾಗಿ ಈ ಲೇಖನ.

ನಾನು ಆಗ ಒಂಬತ್ತನೇ ತರಗತಿಯಲ್ಲಿ ಇದ್ದೆ. ಅಂದೊಂದು ದಿನ ಏನೋ ಯೋಚನೆ ಮಾಡುತ್ತಾ ನಾನು ಮೊದಲನೆ ಮಹಡಿಯ ಮೇಲೆ ನಿಂತಿದ್ದೆ. ಎಲ್ಲಿಂದಲೋ ಒಂದು ಸುಮಧುರ ದ್ವನಿ ಕೇಳಿ ಬಂತು, ತನ್ನದೇ ಲೋಕದಲ್ಲಿ ಅವಳ ಗೆಳತಿಯ ಜೊತೆ ನಗುತ್ತಾ ಬರುತ್ತಿದ್ದಳು ವಂಧನ. ಅವಳ ಹೆಸರು ಮೊದಲೇ ತಿಳಿದಿತ್ತು ನನಗೆ. ಹಿಂತಿರುಗಿ ಅವಳನ್ನು ಒಮ್ಮೆ ನೋಡಿದೆ - ಹಾಗೆ ನೋಡುತ್ತಲೇ ನಿಂತಲ್ಲಿಯೇ ಮರುಳಾಗಿ ಹೋದೆ . ಆ ಗುಂಡು ಮುಖ , ಮದ್ಯೆ ಬೈತಲೆ , ಆ ಕಣ್ಣು ಇದೆಲ್ಲದರ ಜೊತೆಗೆ ಆ ಗಂಭೀರ ನಡೆ , ಮತ್ತೆ ಮತ್ತೆ ಅವಳನ್ನೇ ನೋಡಿದೆ. ಆ ದಿನ ಹೇಗೆ ಮುಗಿಯಿತೋ ತಿಳಿಯಲಿಲ್ಲ.

ಮನೆಗೆ ಬಂದ ಮೇಲೆ ಓದಲು ಬರೆಯಲು ಮನಸೇ ಇರಲಿಲ್ಲ. ಮೊದಲ ಬಾರಿ ಒಂದು ಹುಡುಗಿಯ ಚಿತ್ರ ಕನಸಿನಲ್ಲಿ ಬಂತು. ವಂಧನಳ ಚಿತ್ರವನ್ನು ಕನಸಿನಲ್ಲಿ ನೋಡಿ ಅಚ್ಚರಿ ಅಷ್ಟೆ ಅಲ್ಲ ಮತ್ತೆ ಮತ್ತೆ ನೋಡಬೇಕೆಂಬ ಹಂಬಲ ನನ್ನಲ್ಲಿ ಮೂಡಿತು.

ಮರು ದಿನ ಬೆಳಿಗ್ಗೆ ಶಾಲೆಗೆ ಹೋದ ತಕ್ಷಣ ಯಾವಾಗ ಅವಳನ್ನು ನೋಡುತ್ತಿನೋ ಎಂದು ತಡಪಡಿಸಲಾರಂಬಿಸಿದೆ. ಮುಂಜಾನೆಯ ಪ್ರಾರ್ಥನೆ ಮುಗಿದ ತಕ್ಷಣ ಅವಳ ಸಾಲಲ್ಲಿ ಅವಳು ನಿಧಾನವಾಗಿ ನಡೆದುಕೊಂಡು ಹೋದಳು. ಪ್ರೀತಿ ಮಾಡಿದವರನ್ನು ದೇವರೇ ಸೇರಿಸುತ್ತಾನಂಥೆ. ನನ್ನ ತರಗತಿಯಲ್ಲಿ ಅವಳ ಗೆಳತಿ ಇರುವುದು ನನಗೆ ಗೊತ್ತಿರಲಿಲ್ಲ. ವಂಧನ ಅವಳನ್ನು ಮಾತಾಡಿಸಲು ಬಂದಾಗ ನನ್ನ ಕಣ್ಣು ಅವಳ ಮೇಲೆ ಇತ್ತು. ಇದನ್ನು ಗಮನಿಸಿದ ಅವಳು ನಂತರ ನನ್ನ ಬಳಿಗೆ ಬಂದು " ಹೇಯ್ ಯಾಕೋ ಹಾಗೆ ನೋಡುತ್ತಾ ಇದ್ದೀಯ "ಅಂದಳು, ಏನು ಇಲ್ಲ ನಿನ್ನನು ನೋಡುತ್ತಾ ಇದ್ದರೆ ನೋಡುತ್ತಲೇ ಇರಬೇಕು ಅಂತ ಅನಿಸುತ್ತದೆ ಅಂತ ಹೇಳಿದೆ. ಅದನ್ನು ಕೇಳಿದ ಕೂಡಲೇ ನಕ್ಕು ತಲೆ ತಗ್ಗಿಸಿ ಹೊರಟುಹೋದಳು. ಅಯ್ಯೋ ಇಂಥ ಅವಕಾಶ ಹಾಳು ಮಾಡಿಕೊಂಡೆನಲ್ಲ ಅಂಥ ನನ್ನನ್ನು ನಾನೇ ಬೈದು ಬೇಸರ ಗೊಂಡೆ.

ಮನೆಗೆ ಬಂದ ಮೇಲೆ ಅವಳದೇ ಯೋಚನೆ - ನಿದ್ದೆ ಯಾವಾಗ ಹತ್ತಿತೋ ತಿಳಿಯಲಿಲ್ಲ. ಮೂರನೆಯ ದಿನವಾದ ಇಂದು ಏನಾದರು ಸರಿ ಅವಳನ್ನು ಮಾತಾಡಿಸಬೇಕು ಅಂಥ ನಿರ್ಧಾರ ಮಾಡಿ ಶಾಲೆಗೆ ಹೋದೆ. ಅದ್ರುಸ್ಟ ವಶಾತ್ ಅವಳು ಬೇಗನೆ ಬಂದಿದ್ದಳು , ಯುದ್ದಕ್ಕೆ ಹೋಗುವ ಪರಿಯಲಿ ಸಿದ್ಧವಾಗಿ ಹೋದೆ. ಅವಳ ತರಗತಿಯ ಮುಂದೆ ನಿಂತಿದ್ದಳು. ವಂಧನ ಎಂದು ಮೆಲ್ಲಗೆ ಕರೆದೆ , ಏನು ವಿಶ್ವನಾಥ್ ಅಲ್ಲ ಕಾಶಿ ಎಂದು ಅವಳು ಅಂದಾಗ , ಹೇಯ್ ನನ್ನ ಹೆಸರು ನಿನಗೆ ಹೇಗೆ ಗೊತ್ತು ಅಂತ ಕೇಳಿದೆ ಅದಕ್ಕೆ ಅವಳು ನಿನ್ನ ಹೆಸರು ಮಾತ್ರವಲ್ಲ ನಿನ್ನ ಬಗ್ಗೆ ನನಗೆ ಬಹಳ ಗೊತ್ತು ಅಂತ ಹೇಳಿದಳು. ಆಶ್ಚರ್ಯವಾಗಿ ನಿನ್ನ ಹತ್ತಿರ ನಾನು ಮಾತಾಡಬೇಕು ಅಂತ ಹೇಳಿದೆ , ಅದಕ್ಕೆ ಅವಳು ಈಗ ಬೇಡ, ಮೊದಲನೆ ವಿರಾಮದಲ್ಲಿ ಮಾತಾಡೋಣ ಅಂತ ಹೇಳಿದಳು. ಹಾಳು ಸಮಯ ಎರಡು ಪಾಠ ಮುಗಿಯುವಸ್ಟರಲ್ಲಿ ಎರಡು ಯುಗವೇ ಕಳೆದಂತಾಯಿತು ನನಗೆ. ಮೊದಲನೆ ಮಹಡಿಯಲಿದ್ದ ಪ್ರಾರ್ಥನಾ ಮಂದಿರದ ಎದುರು ನಿಂತು ವಂಧನ ನಾನು ನಿನ್ನನು ಪ್ರೀತಿಸುತ್ತಿದ್ದೇನೆ ಅಂತ ಹೇಳಿಯೇ ಬಿಟ್ಟೆ - ಮೊದಲನೆ ಬಾರಿ ಹೃದಯ ಬಾಯಿಂದ ಹೊರಗೆ ಬಂದು ಬಿಡುವ ಭಾಸವಾಯಿತು. ಅವಳು ನನಗೆ ಯೋಚಿಸಲು ಸ್ವಲ್ಪ ಸಮಯ ಬೇಕು ಅಂತ ಹೇಳಿದಳು. ಬಹುಷಃ ತುಂಬ ಸಿನಿಮಾ ನೊಡುತ್ತಾಳೊ ಏನೋ ಅಂತ ಅಂದು ಕೊಂಡು ಮುಂದಿನ ಪಾಠಕ್ಕಾಗಿ ಹಿಂತಿರುಗಿ ಬಂದೆ. ಮಧ್ಯಾನ ಊಟಕ್ಕೆ ಬಿಟ್ಟಾಗ ಕಾಶಿ I ಲವ್ u ಅಂತ ಅವಳು ಹೇಳಿದ ಕೂಡಲೇ, ಮುಂಗಾರು ಮಳೆಯ ಹನಿಗಳಲ್ಲಿ ಮಿಂದು ಹೋದ ಕಾಶಿ.

ಪ್ರತಿ ದಿನ ಅದೇ ಮಾತು, ಕೆಲವೊಮ್ಮೆ ಮುನಿಸು, ಒಂದು ವರ್ಷ ಹೇಗೆ ಕಳಿಯಿತೋ ತಿಳಿಯಲಿಲ್ಲ. ಬೇಸಿಗೆ ರಜೆಗಾಗಿ ಕಾಯುತ್ತಿದ್ದ ನಾನು ಯಾಕಾದರೂ ರಜೆ ಬಂದಿದೆಯೋ ಅಂತ ಕೊರಗಿದೆ. ಅವಳ ನೆನಪಲ್ಲಿ ಕವನಗಳನ್ನು ಗೀಚಿದೆ , ಕೆಲವು ಚಿತ್ರಗಳನ್ನು ಬಿಡಿಸಿದೆ ಸಮಯ ಸಿಕ್ಕಾಗಲೆಲ್ಲ ಅವಳದೇ ಧ್ಯಾನ. ಹೀಗಿರುವಾಗ ಹತ್ತನೇ ತರಗತಿಗೆ ಹೋಗುವ ಹುಡುಗರಿಗೆ ಹತ್ತು ದಿನ ಮುಂಚಿತವಾಗಿ ಶಾಲೆ ತೆರೆಯಲಿದೆ ಎಂದು ಘೋಷಿಸಿದರು. ನನ್ನಷ್ಟು ಸಂತೋಷ ಪಟ್ಟವರಿಲ್ಲ. ಶಾಲೆಗೆ ಹೋದ ಮೊದಲ ದಿನ ಹೇಗಾದರೂ ವಂಧನಾಗೆ ವಿಷಯ ತಿಳಿಸಬೇಕು ಅಂಥ ಅಂದುಕೊಂಡೆ. ಅದೇ ದಿನ ಅವಳ ಗೆಳತಿಯೊಬ್ಬಳು ಶಾಲೆಯ ಬಳಿ ಸಿಕ್ಕಿದಳು. ಅವಳ ಮುಖಾಂತರ ಸುದ್ದಿ ತಲುಪಿಸಿದೆ. ಮಾರನೆಯ ದಿನ ಶಾಲೆ ಬಿಡುವ ವೇಳೆಗೆ ಸೈಕಲ್ ಸ್ಟಾಂಡ್ನ ಬಳಿ ನನಗಾಗಿ ಕಾದಿದ್ದಳು ವಂಧನ.

ಹತ್ತನೇ ತರಗತಿಗೆ ಬಂದ ನಂತರ ನಾನು ಲಿಟರರಿ ಕ್ಲಬ್ನ ಪ್ರೆಸಿಡೆಂಟ್ ಆಗಿ ಆಯಿಕೆ ಆದೆ. ಭಾಗವಹಿಸಿದ ಎಲ್ಲಾ ಸ್ಪರ್ದೆಯಲ್ಲೂ ನನ್ನದೇ ಮೊದಲ ಸ್ಥಾನ. ಅವಳದೇ ಸ್ಫೂರ್ತಿ, ಅವಳ ನಗುವೇ ನನ್ನ ಪ್ರೇರಣೆ. ಭರತ ನಾಟ್ಯದಲ್ಲಿ ಅವಳನ್ನು ಮೀರಿಸುವರಿರಲಿಲ್ಲ. ಮೊದಲನೆ ಸಾಲಲ್ಲಿ ಕುಳಿತು , ಆಹಾ ಓಹೋ ಅಂತ ಕೊಂಡಾಡಿ, ಹೀಗೇ ಕೊಲ್ಲುತ್ತಿಯ ನನ್ನ ಅಂಥ ಮನಸಿನಲ್ಲೇ ಅಂದು ಕೊಂಡು ಅವಳ ಪ್ರೀತಿಯಲ್ಲಿ ಇನ್ನಸ್ಟು ಮುಳುಗಿ ಹೋದೆ.

ಆ ಒಂದು ವರ್ಷ ಹೇಗೆ ಹಾರಿತೋ ಅದರ ಅರಿವೇ ಆಗಲಿಲ್ಲ. ನನ್ನ ಮತ್ತು ನನ್ನ ಪ್ರೀತಿಯ ಶಾಲೆಯ ಬಂಧ ಅಲ್ಲಿಗೆ ಮುಗಿಯಿತು. ಮೆಲ್ಲಗೆ ಹೆಜ್ಜೆ ಹಾಕಿ ಮನೆಗೆ ಹಿಂತಿರುಗಿ ಬಂದೆ.

ನಾನು ಕಾಲೇಜಿನ ಮೆಟ್ಟಿಲು ಏರಿದೆ. ವಂಧನ ಇನ್ನು ಆಗ ಹತ್ತನೇ ತರಗತಿ. ಮಧ್ಯಾನ ಅವಳು ಮನೆಗೆ ಊಟಕ್ಕಾಗಿ ಹೋಗುತ್ತಿದ್ದಳು, ನಾನು ಕಾಲೇಜಿಗೆ ಬಂಕ್ ಹೊಡೆದು ಶಾಲೆಯ ಗೇಟ್ನ ಬಳಿ ನಿಂತ್ತಿರುತ್ತಿದ್ದೆ. ಎರಡು ನಿಮಿಷದಲ್ಲಿ ಮಾತು ಮುಗಿಸಿ,ಮುಂದಿನ ಭೇಟಿ ಯಾವಾಗ ಅಂಥ ನಿರ್ಧರಿಸಿ ಅವಳು ಮನೆಗೆ, ನಾನು ಕಾಲೇಜಿಗೆ.

ಒಂದು ವಾರದಿಂದ ನಮ್ಮ ಭೇಟಿ ಒಂದು ತಿಂಗಳಿಗೊಮ್ಮೆ ಆಗ ತೊಡಗಿತು. ಬಹುಷಃ ಸೆಲ್ ಫೋನ್ ಆಗ ಇದ್ದಿದ್ದರೆ ಅದರ ತಿರುವೇ ಬೇರೆ ಆಗಿರುತಿತ್ತು. ದಿನಗಳು ಉರುಳಿದಂತೆ ನನ್ನ ಪ್ರೀತಿ ಜಾಸ್ತಿ ಆಗ ತೊಡಗಿತು. ಏನೆಲ್ಲಾ ಪ್ರಯತ್ನ ಪಟ್ಟು ಅವಳನ್ನು ಭೇಟಿ ಮಾಡುವ ಸಾಹಸ ಮಾಡಿದೆ. ಕೆಲವೊಮ್ಮೆ ಸಂತೋಷ, ಕೆಲವೊಮ್ಮೆ ದುಖ. ಹೀಗೆ ದಿನಚರಿಯೇ ಬದಲಾಗಿ ಹೋಯಿತು.

ಪ್ರತಿ ಸಾರಿ ಭೇಟಿ ಆದಾಗಳು ನಾನು ಅವಳಿಗೆ ನಮ್ಮ ಪ್ರೀತಿ ಹೀಗೆ ಇರಬೇಕಾದರೆ ನಾವು ತಾಳ್ಮೆ ಇಂದ ಇರಬೇಕು ಅಂತ ಹೇಳ್ತಾನೆ ಇದ್ದೆ. ಆದರೆ ಅಂಗ್ಲ ಭಾಷೆಯ ನುಡಿ ಮುತ್ತಿನಂತೆ "Out of Sight is Out of Mind" ಕೆಲವರಿಗೆ ನಿಜವಾಗಿಬಿಡುತ್ತದೆ. ಇತ್ತ ಕಡೆ ನನ್ನ ಪ್ರೀತಿ ಜಾಸ್ತಿ ಆಗುತ್ತಾ ಹೋದರೆ ಅತ್ತ ಕಡೆ ವಂಧನ ನನ್ನ ಮರೆಯಲೆತ್ನಿಸಿದಳು. ಕಾರಣ ಏನೇ ಇರಬಹುದು, ನನ್ನ ಎಲ್ಲಾ ಪ್ರಯತ್ನಗಳು ವ್ಯರ್ಥವಾದವು.ಕೊನೆಗೊಮ್ಮೆ ನೋಡು ಕಾಶಿ ನಾನು ಕೂರ್ಗಿ,ನೀನು ಬ್ರಾಹ್ಮಣ ನಮ್ಮಿಬರ ಮಿಲನ ಈ ಜನ್ಮದಲ್ಲಿ ಸಾದ್ಯವಿಲ್ಲ , ನೀನು ನನ್ನನ್ನು ಮರೆತುಬಿಡು ಅಂತ ಹೇಳಿ ಹಿಂದಿರುಗದೆ ಹೊರಟುಹೋದಳು.

ನನಗಂತೂ ಸಾಕಷ್ಟು ಸಮಯವೇ ಬೇಕಾಯಿತು ಅವಳ ಮಾತುಗಳನ್ನು ಜೀರ್ಣಿಸಲು. ಮನಸಿಗೆ ಬಂದದ್ದನ್ನೆಲ್ಲಾ ಬರೆದೆ,ಇನ್ನೂ ಬೇಸರವಾದಾಗ ಮಿತ್ರನೊಂದಿಗೆ ಹಂಚಿಕೊಂಡೆ , ಕೊನೆಗೂ ಬ್ರಹ್ಮೆ ಎಂಬ ಪದದ ಅರ್ಥ ತಿಳಿದೆ. ನಾನು ಮತ್ತೆ ವಂಧನಳನ್ನು ನೋಡಿದ್ದು ಒಂದು ವರ್ಷದ ಬಳಿಕವೇ. ಅಷ್ಟರಲ್ಲಿ ಇಬ್ಬರಲ್ಲೂ ಬಹಳಷ್ಟು ಬದಲಾವಣೆಗಳಾಗಿದ್ದವು. ನನ್ನನ್ನು ಕಂಡೊಡನೆಯೇ ಮುಗುಳ್ನಕ್ಕು ಅದೇ ನೇರ ನೋಟದಿಂದ ನೋಡಿದಳು. ಮತ್ತೆ ಆ ಮಾಯಾ ಜಾಲದಲ್ಲಿ ಸಿಲುಕಲು ನಾನು ಸಿದ್ಧನಿರಲಿಲ್ಲ.

ಅಷ್ಟರಲ್ಲಿ ನಾನು ಜೀವನದ ಮಧುರ ಕ್ಷಣಗಳನ್ನು ನನ್ನ ಮೈಕೋ ಗೆಳೆಯರೊಂದಿಗೆ ಕಳೆಯಲು ನಿರ್ಧರಿಸಿದ್ದೆ. ಈ ಒಂದು ನಿಜ ಘಟನೆ ಸಾಕಷ್ಟು ಅನುಭವಗಳನ್ನು , ಅನೇಕ ಪಾಠಗಳನ್ನು ನನಗೆ ಕಲಿಸಿತ್ತು. ಈ ದಿನ ಯೋಚನೆ ಮಾಡಿದರೆ ಒಂದು ಸುಮಧುರ ಭಾವನೆ, ವಿದಿಯ ಆಟದ ಒಂದು ತುಣುಕು, ನನ್ನನ್ನು ಕವಿಯನ್ನಾಗಿ ಮಾಡಿ, ಆ ನೋವು ಇನ್ನೂ ಬೇಕು ಎಂಬ ಹಂಬಲವನ್ನು ನನ್ನಲ್ಲಿ ಮೂಡಿಸಿ, ಎಂದೂ ಮರೆಯದ ಸವಿ ಚಿತ್ರವನ್ನು ಹೃದಯದಾಳದಲ್ಲಿ ಬಿಡಿಸಿ, ಅಗಾಗ ಹೃದಯದ ಬಡಿತದೊಂದಿಗೆ ಹೊರಬಂದು ನೋವನ್ನುಂಟುಮಾಡಿ ಮತ್ತೆ ತಣ್ಣಗಾಗುವ ಈ ಮುಂಗಾರು ಮಳೆಯ ಚಳಿ ಅನುಭವಿಸಿದವರಿಗೇ ಗೊತ್ತು.

ಏನೇ ಇರಲಿ ನನಗಂತೂ ಎರಡು ವಿಷಯದ ಖುಷಿ - " ಎಲ್ಲಾ ಬ್ರಹ್ಮೆ " ಯಾ ಸ್ವಾದವನ್ನು ಸವಿದೆ.
- ಹುಡುಕಾಟದ ಗೊಂದಲದಲ್ಲಿ ನನ್ನನ್ನೇ ಹಲವಾರು ಬಾರಿ ಹುಡುಕಿಕೊಂಡೆ.

Thursday, 13 November 2008

ಕನ್ನಡದ ಎರಡನೆ ರಚನೆ

ಯಾಕೋ ಏನೋ ಕನ್ನಡದಲ್ಲಿ ಬರೆಯಲು ಕುಳಿತಾಗಲೆಲ್ಲ ಒಂದಲ್ಲ ಒಂದು ಅಡಚಣೆ ಬರುತಲೆ ಇದೆ , ಆದರೆ ಇವತ್ತು ಏನಾದರು ಆಗಲೀ ಬರೆಯಲೇ ಬೇಕು ಅಂಥ ಕುಳಿತುಕೊಂಡೆ .... ಅಬ್ಭಾ ! ಏಷ್ಟು ಆಲೋಚನೆಗಳು , ಏಷ್ಟು ಅನುಭವಗಳು --- ಬಹಳಷ್ಟು ವಿಚಾರಗಳನ್ನು ಆಂಗ್ಲ ಬಾಷೆಯಲ್ಲಿ ಬರೆದು ಬಿಟ್ಟಿರುವೆ ಮುಂದೆ ಆಗುವ ಘಟನೆಗಳನ್ನು ಕನ್ನಡದಲ್ಲಿ ಬರೆಯಬೇಕೆಂಬ ಆಸೆ ಆದರೆ ಈ ಬ್ಲಾಗ್ ನ ಕನ್ನಡ ಅಕ್ಷರ ನನಗೆ ಬಾಯಿ ಪಾಠ ಆಗುವ ವರೆಗೆ ಕಷ್ಟ.

ಪ್ರತಿಯೊಂದು ಅಕ್ಷರ ಬರೆದಾಗಲು ಮತ್ತೆ ಮತ್ತೆ ಪರಿಶೀಲಿಸ ಬೇಕಾದ ಸಂದರ್ಭ , ಕೆಲವು ಅಕ್ಷರಗಳ್ಳನು ಹೇಗೆ ಬರೆಯಬೇಕು ಅಂತ ನನಗೆ ಅರ್ಥವಾಗುವಸ್ಟರಲ್ಲಿ ನನ್ನ ಯೋಚನಾ ಶಕ್ತಿ ತನ್ನ ಹರಿವನ್ನು ಮರೆತು ಬಿಟ್ತಿರುತ್ತದೆ.

ನೋಡುವ ಸಮಯ ಸಿಕ್ಕಾಗಲೆಲ್ಲಾ ಅಭ್ಯಾಸ ಮಾಡಿ ನನ್ನ ಈ ಕನ್ನಡದ ಇಂಗಿತವನ್ನು ತೀರಿಸಿಕೊಳ್ಳುತ್ತೇನೆ .......

Sunday, 24 August 2008

ಕನ್ನಡದ ಮೂದಲ ರಚನೆ !!!

This morning I was experimenting with the blog when I found out that the combination of ಕನ್ನಡ and English was very much possible. Have a lot of scripts that has to be posted especially the poems written by My Father.

ಇದು ಒಂದು ಅದ್ಭುತವಾದ ಅನುಭವ ಮತ್ತು ಸಂತೋಷದ ಸುದ್ದಿ . ಪ್ರೀತಿಯ ಸವಿ ನೆನಪುಗಳಿಗೆ ಬಣ್ಣ ಹಚ್ಚುವ ಮತ್ತೊಂದು ಮಾರ್ಗ.
ಜೀವನದ ಈ ಸುಂದರ ಪಯಣದಲ್ಲಿ ಬಂದು ಹೋದ ಭಂದು ಬಳಗ , ಸ್ನೇಹಿತರು , ಗುರುಗಳು ಮತ್ತು ಮರೆಯಲಾಗದ ಘಟನೆಗಳು --- ಈವೆಲವನ್ನು ಚಿತ್ರಿಸಿ ನನ್ನದೇ ಆದ ಇತಿಹಾಸ ಬರೆದು ಹೋಗುವ ಆಸೆ , ನನ್ನದೇ ಲೋಕ ಹುಟ್ಟಿಸುವ ಪ್ರಯತ್ನ.